ಮಧುಗಿರಿ, ಸೆ.23: ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿವಾಹಿತ ಮಹಿಳೆಯೊಬ್ಬರು ಪ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ರಾಘವೇಂದ್ರ ಬಡಾವಣೆಯಲ್ಲಿ ಬುಧವಾರ ಸಂಜೆ ನಡೆದಿದೆ.
ಮೃತರನ್ನು ರಾಧಮ್ಮ (30) ಎಂದು ಗುರುತಿಸಲಾಗಿದ್ದು, ಮೂಲತಃ ಕಸಬಾ ವ್ಯಾಪ್ತಿಯ ಚಿನಕವಜ್ರ ಗ್ರಾಮದವರು. ಕೂಲಿ ಕೆಲಸ ಮಾಡಿಕೊಂಡು ರಾಘವೇಂದ್ರ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಐದು ವರ್ಷದ ಗಂಡು ಮಗು ಚಿನಕವಜ್ರದಲ್ಲಿರುವ ಪೋಷಕರ ಬಳಿ ಬೆಳೆಯುತ್ತಿದೆ. ಈಕೆಯ ಪತಿ ಅನಾರೋಗ್ಯದಿಂದ ಈ ಹಿಂದೆಯೇ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಡಿವೈಎಸ್ಪಿ ಮಂಜುನಾಥ್, ವೃತ್ತನಿರೀಕ್ಷಕ ಹನುಮಂತರಾಯಪ್ಪ, ಸಬ್ ಇನ್ಸ್ಪೆಕ್ಟರ್ ಚಂದ್ರಶೇಖರ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.